ಬ್ಲ್ಯಾಕೆಟ್, ಪ್ಯಾಟ್ರಿಕ್ ಮೇನಾರ್ಡ್ ಸ್ಟೂಯರ್ಟ್
	1897-1974. ಇಂಗ್ಲೆಂಡಿನ ಭೌತವಿಜ್ಞಾನಿ. 1910ರಲ್ಲಿ ನೌಕಾಶಾಲೆಗೆ ದಾಖಲಾಗಿ ಒಂದನೆಯ ಮಹಾಯುದ್ಧದಲ್ಲಿ ಬ್ರಿಟಿಷ್ ನೌಕೆಯಲ್ಲಿ ಅಧಿಕಾರಿಯಾಗಿ ಭಾಗವಹಿಸಿದ. ಯುದ್ಧ ಮುಗಿದ ಬಳಿದ ಆ ಹುದ್ದೆಗೆ ರಾಜೀನಾಮೆ ನೀಡಿ ಕೇಂಬ್ರಿಜ್ಜಿಗೆ ಹೋಗಿ ರುದರ್ಫರ್ಡನ (1871-1937) ಶಿಷ್ಯನಾಗಿ ಭೌತವಿಜ್ಞಾನಾಧ್ಯಯನ ನಿರತನಾದ.

	ರಾಸಾಯನಿಕ ಧಾತುಗಳ ಪರಮಾಣು ರಚನೆಯ ಬಗ್ಗೆ ಪ್ರಸಕ್ತ ಶತಮಾನದ ಆದಿಯಲ್ಲಿ ಸಾಕಷ್ಟು ಮಾಹಿತಿಗಳು ಸಂಗ್ರಹವಾದುವು. ಈ ದಿಶೆಯಲ್ಲಿ ವಿಲ್ಸನ್ (1899-1956) ಉಪಜ್ಞಿಸಿದ ಮೇಘಮಂದಿರ (ಕ್ಲೌಡ್ ಚೇಂಬರ್) ಪರಮಾಣು ಕಣಗಳ ಜಾಡುಗಳನ್ನು ಗುರುತಿಸಿ ಛಾಯಾಚಿತ್ರೀಕರಿಸುವಲ್ಲಿ ಅತ್ಯಂತ ಉಪಯುಕ್ತ ಉಪಕರಣವೆನಿಸಿತು. ಬ್ಲ್ಯಾಕೆಟ್ ಮುಂದೆ ಇದರ ವ್ಯಾಪಕ ಉಪಯೋಗಕ್ಕೆ ಕಾರಣನಾದ (1920).

	ಮೇಘಮಂದಿರದ ಒಳಗೆ ನೈಟ್ರೂೀಜನ್ನನ್ನು ಆಲ್ಫಕಣಗಳಿಂದ ಬಂಬಾಯಿಸಿ (ಬೊಂಬಾರ್ಡ) ನಿಯತಕಾಲಿಕವಾಗಿ ಆ ಮಂದಿರವನ್ನು ವ್ಯಾಕೋಚಿಸಿ ಅಲ್ಲಿ ರೂಪಣೆಗೊಂಡಿರಬಹುದಾದ ಜಾಡುಗಳ ಛಾಯಾಚಿತ್ರ ಪಡೆದ. ಹೀಗೆ 400,000 ಆಲ್ಫಕಣಗಳ ಜಾಡುಗಳನ್ನು 20,000 ಛಾಯಾಚಿತ್ರಗಳಲ್ಲಿ ಸೆರೆಹಿಡಿದು ಪರೀಕ್ಷಿಸಿದ (1925). ಆ ಜಾಡುಗಳ ಪೈಕಿ ಕೇವಲ ಎಂಟರಲ್ಲಿ ಆಲ್ಫ ಕಣ ನೈಟ್ರೊಜನ್ ಅಣುವಿನೊಂದಿಗೆ ಸಂಘಟ್ಟಿಸಿದ್ದುದು ಚಿತ್ರಿತವಾಗಿತ್ತು. ತತ್ಪರಿಣಾಮವಾಗಿ ಉದ್ಬವಿಸಿದ ಕವಲು ಜಾಡುಗಳು, ಧಾತುಗಳನ್ನು ದ್ರವ್ಯಾಂತರಿಸುವುದು (ಟ್ರಾನ್ಸ್‍ಮ್ಯೂಟ್) ಸಾಧ್ಯವೆಂಬುದಾಗಿ ರುದರ್ಫರ್ಡ್ ತತ್ಪೂರ್ವಮಂಡಿಸಿದ್ದ ವಾದವನ್ನು, ಪ್ರತ್ಯಕ್ಷವಾಗಿ ಸಮರ್ಥಿಸಿದುವು.

	ಹೀಗೆ ಪರಮಾಣು ಪ್ರಾಯೋಗಿಕ ಉಪಕರಣವಾಗಿ ಮೇಘಮಂದಿರದ ಪಾತ್ರ ಮತ್ತು ಉಪಯುಕ್ತತೆ ಸಂದೇಹಾತೀತವಾಗಿ ಸ್ಥಿರಪಟ್ಟವು. ಆದರೆ ಈ ಉಪಕರಣದ ಒಳಗೆ ಯಾವುದೇ ಒಂದು ಕುತೂಹಲಕಾರಿ ಘಟನೆ ಎಂದು ಸಂಭವಿಸಿತು ಎಂಬುದನ್ನು ಮುಂದಾಗಿಯೇ ಅರಿಯಲು ಅವಕಾಶವಿರಲ್ಲಿಲ್ಲ. ಯಾದೃಚ್ಛಿಕವಾಗಿ ಮಂದಿರವನ್ನು ವ್ಯಾಕೋಚಿಸಿ, ಆ ವೇಳೆಗೆ ಏನಾದರೂ ಕುತೂಹಲಕಾರಿ ಘಟನೆ ಕಾಣಬಹುದೆಂದು ಊಹಿಸಿ, ಪರಿಶೀಲಿಸುವುದೊಂದೇ ಪ್ರಾಯೋಗಿಕ ಮಾರ್ಗವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಬ್ಲ್ಯಾಕೆಟ್ ಮೇಘಮಂದಿರವನ್ನು ಎರಡು ಗೀಗರ್ ಗುಣಕಗಳ ನಡುವೆ ಇರಿಸಿದ (1931). ಇವುಗಳ ಮೂಲಕ ಹಾಯುವ ವಿಶ್ವಕಿರಣದ ಯಾವುದೇ ಕಣ ಮೇಘಮಂದಿರದ ಮೂಲಕವೂ ಹೋಗಲೇಬೇಕಾಗಿತ್ತು. ಗುಣಕಗಳ ಮೂಲಕ ಕಣ ಹಾದುಹೋದಾಗ ಉದ್ಧವಿಸುವ ವಿದ್ಯುತ್ಪ್ರವಾಹದ ಕ್ಷೋಭೆ ಮೇಘಮಂದಿರವನ್ನು ಕ್ರಿಯೋದ್ಯುಕ್ತವಾಗಿಸುವಂತೆ ವಿದ್ಯುನ್ಮಂಡಲಗಳನ್ನು ಅಳವಡಿಸಲಾಗಿತ್ತು. ಪರಮಾಣು ಕಣಗಳ ಜಾಡುಗಳನ್ನು ಕುರಿತಂತೆ ಗಮನಾರ್ಹವಾದ ಛಾಯಾಚಿತ್ರ ಪಡೆಯಲು ಈ ಐಕ್ಯ ಗುಣಕಗಳ ಅಳವಡಿಕೆ ವಿಶೇಷ ಅನುಕೂಲತೆ ಒದಗಿಸಿತು.

	ಸೀಸದ ಮೂಲಕ ಹಾಯುವ ಗ್ಯಾಮ ಕಿರಣಗಳು ಕೆಲವೊಮ್ಮೆ ಮರೆಯಾಗಿ ಪಾಸಿಟ್ರಾನ್ ಹಾಗೂ ಎಲೆಕ್ಟ್ರಾನ್ ಕಣಗಳ ಉಗಮಕ್ಕೆ ಕಾರಣವಾಗುವುದೆಂದು ಬ್ಲ್ಯಾಕೆಟ್ 1935ರಲ್ಲಿ ತೋರಿಸಿದ. ಇಲ್ಲಿ ಶಕ್ತಿ (ಗ್ಯಾಮ ಕಿರಣಗಳು) ರಾಶಿಯಾಗಿ (ಕಣಗಳು) ಪರಿವರ್ತನೆಗೊಂಡು ಇ=mಛಿ2 ಸಮೀಕರಣಕ್ಕೆ ಪ್ರಥಮ ಪ್ರತ್ಯಕ್ಷ ಪುರಾವೆ ಒದಗಿಸಿದುವು. (ರಾಶಿ ಶಕ್ತಿಯಾಗಿ ಪರಿವರ್ತನೆಗೊಳ್ಳುವುದರ ಬಗ್ಗೆ ಪ್ರತ್ಯಕ್ಷ ಪುರಾವೆ ಆ ಮೊದಲೇ ಲಭ್ಯವಾಗಿತ್ತು.) ವಿಲ್ಸನ್ ಮೇಘಮಂದಿರ ಕುರಿತು ಬ್ಲ್ಯಾಕೆಟ್ ಮಾಡಿದ ಮೂಲಭೂತ ಕಾರ್ಯ ಗಮನಿಸಿ ಈತನಿಗೆ 1948ರಲ್ಲಿ ಸಾಲಿನ ನೊಬೆಲ್ ಪಾರಿತೋಷಿಕ ನೀಡಿ ಗೌರವಿಸಲಾಯಿತು.

	ಎರಡನೆಯ ಮಹಾಯುದ್ಧದ ವೇಳೆ ಬ್ಲ್ಯಾಕೆಟ್ ರೇಡಾರ್ ಮತ್ತು ಪರಮಾಣು ಬಾಂಬ್ ಕ್ಷೇತ್ರಗಳಲ್ಲಿ ಕೆಲಸಮಾಡಿದ. ನ್ಯೂಕ್ಲಿಯರ್ ಯುದ್ಧ ವಿಧಾನಗಳ ಮಾರಕತೆಯನ್ನು ಚೆನ್ನಾಗಿ ಮನಗೊಂಡು ಈತ ಯುದ್ಧನಂತರ ನ್ಯೂಕ್ಲಿಯರ್ ಶಸ್ತ್ರೀಕರಣದ ಪ್ರಬಲ ವಿರೋಧಿಯಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ